ಪ್ಲೋಟೈನಸ್
	ಕ್ರಿ.ಶ.ಸು.205-270. ಈಜಿಪ್ಟಿನ ತತ್ತ್ವಶಾಸ್ತ್ರಜ್ಞ. ನವಪ್ಲೇಟೋ ತತ್ತ್ವ ಪ್ರವರ್ತಕರಲ್ಲಿ ಮುಖ್ಯ. ಹುಟ್ಟಿದ್ದು ಈಜಿಪ್ಟಿನ ಲೈಕೊಪೊಲಿಸ್ಸಿನಲ್ಲಿ. ಗ್ರೀಕ್ ಸಂಸ್ಕøತಿಯ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮಾಡಿದ. ಅಲೆಗ್ಸಾಂಡ್ರಿಯದ ಅಮೋನಿಯಸ್ ಸ್ಯಾಕಸ್ ಎಂಬ ಗುರುವಿನ ಬಳಿ ಹನ್ನೊಂದು ವರ್ಷಗಳ ಕಾಲ ತತ್ತ್ವಶಾಸ್ತ್ರ ಅಧ್ಯಯನ ಮಾಡಿದ. ಅನಂತರ ಪಾರಸಿ ಮತ್ತು ಭಾರತೀಯ ತತ್ತ್ವಶಾಸ್ತ್ರಗಳ ಅಧ್ಯಯನಕ್ಕೆಂದು ಸು. 242ರಲ್ಲಿ ಚಕ್ರವರ್ತಿ ಮೂರನೆಯ ಗಾರ್ಡಿಯನ್ ಜೊತೆ ಮೆಸಪಟೋಮಿಯಾಕ್ಕೆ ತೆರಳಿದ ರೋಮ್ ನಗರದಲ್ಲೊಂದು ತನ್ನ ತತ್ತ್ವದ ಪ್ರಚಾರ ಶಾಖೆ ಸ್ಥಾಪಿಸಿದ. ಸು. 262ರಲ್ಲಿ ಕ್ಯಾಂಪಾನಿಯಾಕ್ಕೆ ಹಿಂದಿರುಗಿ ಅಲ್ಲೇ ನೆಲಸಿದ.

	ಈತ ಪ್ರತಿಪಾದಿಸಿರುವ ತತ್ತ್ವ ಸಂಪೂರ್ಣ ಆದರ್ಶಗಳಿಂದ ಕೂಡಿದ್ದು ಸರಳವೂ ಸುಂದರವೂ ಆಗಿದೆ. ಈತನ ದೇವರು ಚಿನ್ಮಯಸ್ವರೂಪನಾಗಿದ್ದು, ಎಲ್ಲ ಸದ್ಗುಣಗಳ ಗಣಿಯೂ ಅಖಂಡನೂ ವರ್ಣನಾತೀತನೂ ಆಗಿದ್ದಾನೆ. ಸದ್ಗುಣಿಯಾದ ದೇವರಿಂದ ಬುದ್ಧಿ (ನೌಸ್) ಉತ್ಪನ್ನವಾಗಿ ಅದರ ವಿಶ್ವದ ಆತ್ಮ ಜನಿಸಿದೆ. ವಿಶ್ವದ ಆತ್ಮ ಮತ್ತೆ ಅನೇಕ ಶಕ್ತಿಗಳ ಮನುಷ್ಯನ ಆತ್ಮವೂ ಸೇರಿದಂತೆ-ಹುಟ್ಟಿಗೆ ಕಾರಣವಾಗುತ್ತದೆಯಲ್ಲದೆ ಕೊನೆಯ ಹಂತದಲ್ಲಿ ವಸ್ತುವೂ ಸೃಷ್ಟಿಗೊಳ್ಳುತ್ತದೆ. ಮನುಷ್ಯ ತನ್ನ ಜೀವಿತ ಸಮಯದಲ್ಲಿ ಅಸತ್ಯ ಮತ್ತು ಕ್ಷಣಿಕ ವಸ್ತುಗಳ ಸಂಕೋಲೆಗಳಿಂದ ಬಿಡುಗಡೆ ಹೊಂದಿ ಅಂತಿಮವಾಗಿ ಪರಮಾತ್ಮನಲ್ಲಿ ಐಕ್ಯ ಪಡೆಯುವ ಪ್ರಯತ್ನ ಮಾಡಿದಾಗ ಮಾತ್ರ ಪರಮಾನಂದವನ್ನು ಪಡೆಯಬಹುದು. ಇದು ಈತನ ತತ್ತ್ವದ ಮುಖ್ಯ ಅಂಶ. 

ಯೂರೋಪಿನ ಚಿಂತನ ಇತಿಹಾಸದಲ್ಲಿ ಈತನ ಸ್ಥಾನ ಬಹುಪ್ರಮುಖವಾದ್ದು. ಈತ ಬಿತ್ತರಿಸಿದ ನವಪ್ಲೇಟೋ ತತ್ತ್ವ ಉನ್ನತ ಸ್ಥಾನವನ್ನು ಗಳಿಸಿತಲ್ಲದೆ ಈತನ ಮರಣಾನಂತರ ಗ್ರೀಕ್ ತಾತ್ತ್ವಿಕ ಪ್ರಪಂಚದ ಮೇಲೆ ಅತ್ಯಂತ ಪ್ರಭಾವಶಾಲಿ ಪರಿಣಾಮವನ್ನುಂಟು ಮಾಡಿತು. ಕ್ರಿಶ್ಚನ್ ಚಿಂತನಕಾರರು, ಮುಸ್ಲಿಂ ಮತ್ತು ಯೆಹೂದ್ಯ ದಾರ್ಶನಿಕರು ಅದರಿಂದ ಪ್ರಭಾವಿತರಾದರು. ಈತನ ಕೃತಿಗಳನ್ನು ಪೊರ್‍ಪರೀ ಎಂಬ ಶಿಷ್ಯನೊಬ್ಬ ಆರು ವಿಭಾಗಗಳನ್ನಾಗಿ ವಿಂಗಡಿಸಿ ಸಂಪಾದಿಸಿದ್ದಾನೆ ಪ್ರತಿವಿಭಾಗವೂ ಒಂಬತ್ತು ಗ್ರಂಥಗಳನ್ನೊಳಗೊಂಡಿದೆ.										(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ